ವಿದ್ಯೆ ಕೇವಲ ಪುಸ್ತಕೀಯ ಜ್ಞಾನವಲ್ಲ. ಶೀಕ್ಷಿತ ವ್ಯಕ್ತಿಯ ಸಾಮರ್ಥ್ಯವು ಅವರ ವ್ಯಕ್ತಿತ್ವದಲ್ಲಿ ಕಾಣಸಿಗುತ್ತದೆ. ವ್ಯಕ್ತಿತ್ವದ ಗುಣಾತ್ಮಕ ಅಂಶಗಳ ಬೆಳವಣಿಗೆಯಗೋಸ್ಕರ ದೈಹಿಕ, ಮಾನಸಿಕ, ತಾತ್ವಿಕ, ಮತ್ತು ಆಧ್ಯಾತ್ಮಿಕ ಅಭಿವೃಧ್ದಿಗೆ ಅವಕಾಶಗಳನ್ನು ನೀಡಬೇಕಾಗುತ್ತದೆ. ಮಕ್ಕಳ ಬೆಳವಣಿಗೆಯ ರಚನಾತ್ಮಕ ಅವಧಿಯಲ್ಲಿ ಈ ವಿಷಯಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಈ ಕಾರಣದಿಂದ, ಪ್ರತೀ ವಿಧ್ಯಾರ್ಥಿಯ ಪ್ರಬಲ ಗುಣಗಳನ್ನು ಗುರುತಿಸಿ, ಅವರು ತಮ್ಮ ವ್ಯಕ್ತಿತ್ವವನ್ನು ರಚಿಸಿಗೊಳ್ಳಲು ಸಮರ್ಥರಾಗುವಂತೆ ಸಾರ್ವತ್ರಿಕ ಪ್ರೋತ್ಸಾಹ ನೀಡಬೇಕಾಗುತ್ತದೆ.

​ ವ್ಯಕ್ತಿತ್ವ ವಿಕಸನದ ಪ್ರಕ್ರಿಯೆಯಲ್ಲಿ ಅಪಾರ ಬೆಲೆಯುಳ್ಳಂತಹ ಅಂಶಗಳಾದ ಆತ್ಮವಿಶ್ವಾಸ, ಆತ್ಮಜ್ಞಾನ, ಆತ್ಮಗೌರವ ಸ್ವಾಭಿಮಾನ, ಮಾನಸಿಕ ಸಾಮರ್ಥ್ಯ, ಮತ್ತು ಸ್ತೈರ್ಯಗಳು ಸಾಮಾಜಿಕ, ಶೈಕ್ಷಣಿಕ, ಮತ್ತು ಕೌಟುಂಬಿಕ ಪರಿಸರದಿಂದ ಪ್ರಭಾವಿತವಾಗುತ್ತವೆ. ಅನುಕರಣೆಯಿಂದ ಕಲಿಯುವ ವಯಸ್ಸಿನಲ್ಲಿ ಗುಣಮಟ್ಟದ ಉದಾಹರಣೆಗಳು ಕಾಣಸಿಗದಿದ್ದರೆ ಮಕ್ಕಳು ವಿಕಲ, ನೀರಸ, ಮತ್ತು ಅನಿರ್ದಿಷ್ಟ ಮಾನಸಿಕತೆಯನ್ನು ಬೆಳೆಸಿಕೊಂಡು ತೋಳಲಾಡಬೇಕಾಗುತ್ತದೆ. ವಿಲಕ ಮನಸ್ಸು ಸಾಧನೆಯ ಹಾದಿಯನ್ನು ಧೀರ್ಘಗೋಳಿಸುವುದಷ್ಟೇ ಅಲ್ಲದೆ ಜೀವನದ ಗುಣಮಟ್ಟಕ್ಕೆ ಅಪಾರ ಹಾನಿಯನ್ನುಂಟು ಮಾಡುತ್ತದೆ. ವಿಕಲ ವ್ಯಕ್ತಿತ್ವ ಸಾಧನೆಯ ಮಾರ್ಗದಲ್ಲಿ ಆಗಮಿಸುವುದಕ್ಕೇ ತಡೆಯೊಡ್ಡಬಹುದು. ಹೀಗಾಗಿ ಅನೇಕ ಪ್ರತಿಭಾವಂತ ವಿಧ್ಯಾರ್ಥಿಗಳು ಮಾರ್ಗದರ್ಶನವಿಲ್ಲದೆ, ತಮ್ಮ ಕಸುವಿನ ಅರಿವಿಲ್ಲದೆ ಅವಕಾಶಗಳಿಂದ ವಂಚಿತರಾಗುತ್ತಾರೆ. ಈ ಬಗೆಯ ಪ್ರತಭಾವಿನಾಶದಿಂದ ಸಮಾಜದ ಬೆಳವಣಿಗೆ ಸಂಕುಚಿತಗೊಳ್ಳುತ್ತದೆ. ಬಲಿಷ್ಠ ಸಮಾಜಗಳು ಬಲಿಷ್ಠ ವ್ಯಕ್ತಿಗಳಿಂದ ನಿರ್ಮಾಣವಾಗುತ್ತವೆ ಎಂಬ ಹೇಳಿಕೆಯಲ್ಲಿ ಯಾವುದೇ ಸಂದೇಹವಿವಲ್ಲ.

​ ನಮ್ಮೆಲ್ಲರ ಮಾನಸಿಕ ಸ್ಥಿತಿಗತಿಗಳು ನಮ್ಮ ಸುತ್ತಮುತ್ತಲಿನ ಜನ ನಮ್ಮೊಂದಿಗೆ ವರ್ತಿಸುವ ಬಗೆಯಿಂದ ಪ್ರಭಾವಿತವಾಗುತ್ತವೆ. ಗೌರವ ಕೊಡದಿರುವ ಜನರನ್ನು ನಾವು ಹೇಗೆ ಇಷ್ಟಪಡುವುದಿಲ್ಲವೋ, ಹಾಗೇ ಮಕ್ಕಳು ತಮ್ಮೊಂದಿಗೆ ಅಗೌರವದಿಂದ ನಡೆದಿಕೊಳ್ಳುವ ಹಿರಿಯರ ಬಗ್ಗೆ ಹೀನ ಮನೋಭಾವನೆಯನ್ನು ಬೆಳೆಸಿಕೊಳ್ಳುತ್ತಾರೆ. ಸತತವಾಗಿ ಋಣಾತ್ಮಕ ಸನ್ನಿವೇಶಗಳಿಗೆ ಒಡ್ಡಲ್ಪಟ್ಟ ಮಕ್ಕಳ್ಳು ಮಾನಸಿಕ ತೊಳಲಾಟದಿಂದ ಬಳಲುವುದರೊಂದಿಗೆ ಆತ್ಮಗೌರವ ಮತ್ತು ಆತ್ಮವಿಶ್ಸ್ವಾಸಗಳನ್ನು ಕಳೆದುಕೊಳ್ಳುತ್ತಾರೆ. ಮಕ್ಕಳನ್ನು ತೆಗಳುವುದು, ಅವರ ಮಾತು, ಅಭಿಪ್ರಾಯ, ಕೋರಿಕೆಗಳಿಗೆ ಗಮನ ಮತ್ತು ಮನ್ನಣೆಕೊಡದಿರಿವುದು, ನಮ್ಮ ಋಣಾತ್ಮಕ ನಡುವಳಿಕೆಗಳನ್ನು ಅವರ ಮುಂದೆ ರಾರಾಜಿಸುವುದು, ಅನುಚಿತ ವರ್ತನೆ, ನಮ್ಮ ಧೋರಣೆಗಳನ್ನು ಅವರ ಮೇಲೆ ಹೇರುವುದು, ಇಷ್ಡವಿಲ್ಲದ ವಿಷಯಗಳಲ್ಲಿ ಒತ್ತಾಯ ಮಾಡುವುದು, ನಮ್ಮ ಅಪೂರ್ಣ ಧ್ಯೇಯಗಳನ್ನು ಅವರ ಜೀವನದ ಮುಖಾಂತರ ಸಾಕ್ಷಾತ್ಕರಿಕೊಳ್ಳುವ ಪ್ರಯತ್ನದಲ್ಲಿ ನಿರತರಾಗಿರುವುದು, ದಿನನಿತ್ಯ ನಮ್ಮ ಜೀವನದ ಕಷ್ಟಾನುಭವಗಳ ಉದಾಹರಣೆ ನೀಡುವುದು, ಇತ್ಯಾದಿ ವರ್ತನೆಗಳು ಮಕ್ಕಳ ವ್ಯಕ್ತಿತ್ವ ಬೆಳವಣಿಗೆಗೆ ಬಹು ವಿಷಕಾರಿ. ಈ ಬಗೆಯ ಅನುಭವಗಳು ಮಕ್ಕಳ ಸೂಕ್ಷ್ಮ ಮನಸ್ಸಲ್ಲಿ ಗೊಂದಲ ಸೃಷ್ಠಿಸುದಲ್ಲದೇ ಒತ್ತಡ, ಅಸುರಕ್ಷತೆಯಂತಹ ಭಾವನೆಗಳನ್ನು ಉತ್ಪಾದಿಸುತ್ತವೆ. ಒತ್ತಡಕ್ಕೊಡ್ಡಿದ ಮನಸ್ಸು ಆತಂಕ, ದುಘುಡ, ಖಿನ್ನತೆಯಂತಹ ಮನೋರೋಗಗಳಿಗೆ ಆಹ್ವಾನ ನೀಡುತ್ತದೆ, ಮತ್ತು ಶಾಂತಿಯನ್ನು ಕಳೆದುಕೊಳ್ಳುತ್ತದೆ. ಅಶಾಂತ, ಅತೃಪ್ತ ಮನಸ್ಥಿತಿಯು ಗುಣಾತ್ಮಕ, ಬಲಿಷ್ಠ ವ್ಯಕ್ತಿತ್ವ ಬೆಳವಣಿಗೆಗೆ ಅವಕಾಶ ನೀಡಲಾರದು.

​ ಮಕ್ಕಳ ಸಾರ್ವತ್ರಿಕ ಬೆಳವಣಿಗೆಗಾಗಿ ಸುರಕ್ಷಿತ, ಮುಕ್ತ, ಮತ್ತು ಹಿತವಾದ ವಾತಾವರಣವನ್ನು ಸೃಷ್ಟಿಸಿವುದು ಪೋಷಕರ ಮತ್ತು ಶಿಕ್ಷಕರ ಕರ್ತವ್ಯ. ಆವರು ಬೆಳೆಯುವ ವಾತಾವರಣದಲ್ಲಿ ವೈಚಾರಿಕ, ರಚನಾತ್ಮಕ, ಮತ್ತು ಮಾನಸಿಕ ಸ್ವಾತಂತ್ರ್ಯವನ್ನು ಪೂರೈಸಬೇಕು. ಮಕ್ಕಳ ಪ್ರಬಲತೆಯನ್ನು ಗುರುತಿಸಿ ಆ ಗುಣಗಳು ಬೆಳೆಯವಂತೆ ಪ್ರೋತ್ಸಾಹ ನೀಡಬೇಕು. ಜಾಗತಿಕವಾಗಿ ಎಲ್ಲ ಬಗೆಯ ಪ್ರತಿಭೆಗೆ ಅವಕಾಶವಿದೆ ಎಂಬ ಅರಿವು ಮುಖ್ಯ.

​ ಸ್ವಾವಲಂಭಿ, ಸಮರ್ಥ, ಸಂತೃಪ್ತ ಸಾಧಕರನ್ನು ಸಮಾಜಕ್ಕೆ ನೀಡುವ ಗುರಿಯಿಂದ ಮಕ್ಕಳ ಪೋಷಣೆ ಮಾಡೋಣ. ಈ ಉದ್ದೇಶದಿಂದ ಮಕ್ಕಳ ವ್ಯಕ್ತಿತ್ವದ ಬೆಳವಣಿಗೆಗೆ ಸಂಪೂರ್ಣ ಸಹಕಾರದಿಂದ ವರ್ತಿಸಬೇಕು ಮತ್ತು ಸ್ವಾರ್ಥಿಕ ವರ್ತನೆಯನ್ನು ಬದಿಗಿಡಬೇಕು.


Cite As: Umadi, Ravi (2023). ವ್ಯಕ್ತಿತ್ವ ಬೆಳವಣಿಗೆ - ರೂಪುರೇಖೆ, Retrieved from https://biosonix.io/Personality-Developement